ಬೆಂಗಳೂರು:ಜನವರಿ 31 : ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಅವರ ನೇತೃತ್ವದಲ್ಲಿ ಎಸ್‌ಐಟಿ ಕಾರ್ಯನಿರ್ವಹಿಸಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಎಸ್‌ಐಟಿ ತಂಡದಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳ ಸಮ್ಮುಖದಲ್ಲೇ ಆತ್ಮಹತ್ಯೆ ನಡೆದಿರುವ ಹಿನ್ನೆಲೆಯಲ್ಲಿ, ಐಟಿ ಅಧಿಕಾರಿಗಳನ್ನು ವಿಚಾರಣೆ ಮಾಡಬೇಕೇ ಬೇಡವೇ ಎಂಬುದನ್ನು ತನಿಖಾಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಜೆ ರಾಯ್ ಬಳಸುತ್ತಿದ್ದ ಐಫೋನ್ ಹಾಗೂ ಆ್ಯಂಡ್ರಾಯ್ಡ್ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡು ಸಿಐಡಿಗೆ ಹಸ್ತಾಂತರಿಸಿದ್ದಾರೆ. ಎರಡು ಮೊಬೈಲ್‌ಗಳಿಗೂ ಪಾಸ್‌ವರ್ಡ್ ಇರುವ ಕಾರಣ ಕೋರ್ಟ್ ಅನುಮತಿ ಪಡೆದು ಎಫ್‌ಎಸ್‌ಎಲ್‌ಗೆ ರವಾನೆ ಮಾಡುವ ಅಗತ್ಯವಿದೆ. ತಾತ್ಕಾಲಿಕವಾಗಿ ಸಿಐಡಿ ಸೈಬರ್ ಸೆಲ್‌ಗೆ ಮೊಬೈಲ್‌ಗಳನ್ನು ಕಳುಹಿಸಲಾಗಿದ್ದು, ಅವುಗಳಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ರಿಕವರಿ ಮಾಡುವ ಕಾರ್ಯ ನಡೆಯಲಿದೆ.
ಇದೇ ವೇಳೆ, ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಮಾಹಿತಿಗಳು ಹೊರಬರುತ್ತಿವೆ. ಪೊಲೀಸ್ ತನಿಖೆ ವೇಳೆ ಸಿಜೆ ರಾಯ್ ಅವರ ವೈಯಕ್ತಿಕ ಡೈರಿ ಪತ್ತೆಯಾಗಿದೆ ಎನ್ನಲಾಗಿದೆ. ಆ ಡೈರಿಯಲ್ಲಿ ಅವರು ಬೆಂಗಳೂರಿನ ಪ್ರಭಾವಿ ರಾಜಕಾರಣಿಗಳು ಹಾಗೂ ಚಿತ್ರರಂಗದ ಹಲವು ಗಣ್ಯರೊಂದಿಗೆ ಹೊಂದಿದ್ದ ಸಂಪರ್ಕಗಳ ಕುರಿತು ಉಲ್ಲೇಖಿಸಿರುವುದು ಗಮನಾರ್ಹವಾಗಿದೆ.





