ಕಾರ್ಕಳ : ಜನವರಿ 31:ದೇಶದ ಕಟ್ಟಕಡೆಯ ವ್ಯಕ್ತಿಗೂ ನೇರವಾಗಿಲಾಭ ತಲುಪುವಂತಹ ಜನಪರ ಯೋಜನೆ ನರೇಗಾ ಆಗಿದ್ದು, ಕೇಂದ್ರದ ಯುಪಿಎ ಸರ್ಕಾರವು ಜನರ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ಲಾಭಕ್ಕಾಗಿ ಈ ಯೋಜನೆಯ ಹೆಸರನ್ನೇ ಬದಲಾಯಿಸುವ ಮೂಲಕ ಜನಸಾಮಾನ್ಯರ ಮೇಲೆ ಗದಾಪ್ರಹಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪಿಸಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ “ಮನರೇಗಾ ಬಚಾವೋ ಸಂಗ್ರಾಮ್” ಆಂದೋಲನದ ಅಂಗವಾಗಿ ನಡೆದ ಗಾಂಧಿ ನಡಿಗೆ ಜಾಥಾ ಹಾಗೂ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಆಯೋಜಿಸಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳುವುದರಲ್ಲೇ ನಿರತರಾಗಿದ್ದು, ರಾಜ್ಯಗಳ ಅಭಿವೃದ್ಧಿಯತ್ತ ಗಮನ ಹರಿಸುತ್ತಿಲ್ಲ. ಇದರ ಪರಿಣಾಮವಾಗಿ ರಾಜ್ಯಗಳು ಗಂಭೀರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ ಎಂದು ತಿಳಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಯ ಹೆಸರು ಮತ್ತು ಮೂಲ ಸ್ವರೂಪವನ್ನೇ ಬದಲಾಯಿಸಿ ಕಾರ್ಮಿಕರ ಉದ್ಯೋಗ ಹಕ್ಕನ್ನು ಕಸಿದುಕೊಂಡಿದೆ. ಹಿಂದಿನ ಉದ್ಯೋಗ ಖಾತರಿ ಯೋಜನೆಯನ್ನು ಮರು ಜಾರಿಗೊಳಿಸಿ, ಮತ್ತೆ ಗಾಂಧಿ ಹೆಸರನ್ನು ಪುನರ್ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಮಾತನಾಡಿ, ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಜಾರಿಯಲ್ಲಿದ್ದ ಜನಪರ ಯೋಜನೆಗಳನ್ನು ಹಂತ ಹಂತವಾಗಿ ನಿಷ್ಕ್ರಿಯಗೊಳಿಸುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ. ರಾಮನ ತತ್ವಾದರ್ಶಗಳು ವಿಶ್ವಮಾನ್ಯವಾದರೂ, ರಾಮನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿರುವುದು ಖೇದಕರವಾಗಿದೆ ಎಂದು ಹೇಳಿದರು. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ತಂದಿದ್ದ ಜನಪಯೋಗಿ ಯೋಜನೆಗೆ ಮಸಿ ಬಳಿಯುವ ಕೆಲಸ ಬಿಜೆಪಿ ಮಾಡಿದೆ ಎಂದು ಆರೋಪಿಸಿದರು.
ಹಿರಿಯ ನ್ಯಾಯವಾದಿ ಶೇಖರ ಮಡಿವಾಳ ಮಾತನಾಡಿ, ಕ್ರಾಂತಿಕಾರಿ ಯೋಜನೆಯಾದ ಮನರೇಗಾವನ್ನು ಹದಗೆಡಿಸಿರುವ ಉದ್ದೇಶವೇನು ಎಂಬುದನ್ನು ಜನರ ಮುಂದೆ ವಿವರಿಸುವ ಧೈರ್ಯ ಬಿಜೆಪಿಗಿದೆಯೇ ಎಂದು ಪ್ರಶ್ನಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ಏಕತೆ, ಸಮಾನತೆ ಹಾಗೂ ಅಸ್ಪೃಶ್ಯತೆ ನಿವಾರಣೆಗೆ ಮಹತ್ವದ ಪಾತ್ರವಹಿಸಿದ್ದ ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಂತ ಹಂತವಾಗಿ ಕೊಲ್ಲುತ್ತಿದೆ. ಇಂತಹ ಧೋರಣೆಯನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
skanda.co
ನಂತರ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ತೆರಳಿ ತಹಶಿಲ್ದಾರರಿಗೆ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ನೀಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್, ಗೋಪಿನಾಥ್ ಭಟ್, ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ, ಶೇಖ್ ಶಬೀರ್, ಜಾರ್ಜ್ ಕ್ಯಾಸ್ಟಲಿನೊ, ಸುಧಾಕರ ಶೆಟ್ಟಿ ಮುಡಾರು, ಅನಿಲ್ ಪೂಜಾರಿ, ಕುಶ. ಆರ್. ಮೂಲ್ಯ, ದೀಪಕ್ ಕೋಟ್ಯಾನ್, ಸುಭಿತ್ ಎನ್.ಆರ್., ಪ್ರತಿಮಾ ರಾಣೆ, ವಿವೇಕಾನಂದ ಶೆಣೈ, ಪ್ರಭಾಕರ ಬಂಗೇರ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.






