ಮಣಿಪಾಲ, ಆ. 23, : ಅಂತರಾಷ್ಟ್ರೀಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಗೆ ಶನಿವಾರ ಕರ್ನಾಟಕ ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಭೇಟಿ ನೀಡಿದರು. ಮಣಿಪಾಲಕ್ಕೆ ಅವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಅವರು ಮಾಹೆಗೆ ಆಗಮಿಸಿದರು.
ಡಾ. ಜಿ. ಪರಮೇಶ್ವರರವರು ಮಾಹೆಯ ದೀರ್ಘಕಾಲದ ಪರಂಪರೆ ಹಾಗೂ ಶಿಕ್ಷಣ, ಆರೋಗ್ಯ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನತೆ ಕ್ಷೇತ್ರಗಳಲ್ಲಿ ಕಾಪಾಡಿಕೊಂಡಿರುವ ಉನ್ನತ ಮಟ್ಟದ ಮಾನದಂಡಗಳನ್ನು ಪ್ರಶಂಸಿಸಿದರು.
ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ಅಧ್ಯಾಪಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಸ್ಥಾಪಕರಾದ ಡಾ. ಟಿ.ಎಂ.ಎ. ಪೈ ಅವರಿಗೆ ಗೌರವ ನಮನ ಸಲ್ಲಿಸಿ, ಸಮಗ್ರ ಅಭಿವೃದ್ಧಿ, ವಿಶ್ವಮಟ್ಟದ ಮೂಲಸೌಕರ್ಯ ಮತ್ತು ವೈವಿಧ್ಯಮಯ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಮಾಹೆ ತೋರಿಸಿರುವ ಬದ್ಧತೆಯನ್ನು ಮೆಚ್ಚಿದರು. ಉನ್ನತ ಶಿಕ್ಷಣದ, ವಿಶೇಷವಾಗಿ ವೈದ್ಯಕೀಯ ಶಿಕ್ಷಣದ ಪ್ರಮುಖ ಕೇಂದ್ರವೆಂದು ಗುರುತಿಸಲ್ಪಡುವ ಮಾಹೆಯ ಸ್ಥಾನವನ್ನು ಉಲ್ಲೇಖಿಸಿ, ರಾಷ್ಟ್ರೀಯ ಹಾಗೂ ಜಾಗತಿಕ ಆರೋಗ್ಯ ಕ್ಷೇತ್ರಗಳಲ್ಲಿ ಈ ಸಂಸ್ಥೆಯ ಅಗಾಧ ಕೊಡುಗೆಯನ್ನು ಪ್ರಸ್ತಾಪಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಶೈಕ್ಷಣಿಕ ಗುಣಮಟ್ಟದಲ್ಲಿ ಮಾಹೆ ಬೆಳೆಸಿಕೊಂಡಿರುವ ಅಂತರಾಷ್ಟ್ರೀಯ ಮಾನದಂಡಗಳನ್ನು ಪ್ರಶಂಸಿಸಿದ ಅವರು, ಭಾರತದ ವಿಸ್ತರಿಸುತ್ತಿರುವ ಶೈಕ್ಷಣಿಕ ಮತ್ತು ಆರೋಗ್ಯದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸುವ ಮಹತ್ವವನ್ನು ಒತ್ತಿ ಹೇಳಿದರು. ನಿಪುಣ ತಜ್ಞರ ತಯಾರಿ, ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ಶೈಕ್ಷಣಿಕ ಶಿಸ್ತಿನ ಕಡೆಗೆ ಮಾಹೆ ನೀಡಿರುವ ವಿಶೇಷ ಕೊಡುಗೆಯನ್ನು ಗುರುತಿಸಿದರು.
ಪ್ರೋ ಚಾನ್ಸಲರ್ ಡಾ. ಎಚ್.ಎಸ್. ಬಳ್ಳಾಲ್ ಅವರು ಸಚಿವ ಡಾ. ಪರಮೇಶ್ವರರನ್ನು ಸ್ವಾಗತಿಸಿದರು. ಮಾಹೆ ರಿಜಿಸ್ಟ್ರಾರ್ ಡಾ. ಗಿರಿಧರ ಕಿನಿ ಧನ್ಯವಾದಗಳನ್ನು ಸಲ್ಲಿಸಿದರು. ಪ್ರೋ ವೈಸ್ ಚಾನ್ಸಲರ್ ಡಾ. ನರಾಯಣ ಸಭಾಹಿತ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಡಾ. ಜಿ. ಪರಮೇಶ್ವರರವರು ಆಧುನಿಕ ಕ್ರೀಡಾಂಗಣ ಮರೇನಾ ಸೇರಿ ಕ್ಯಾಂಪಸ್‌ನ ಪ್ರಮುಖ ಸೌಲಭ್ಯಗಳನ್ನು ವೀಕ್ಷಿಸಿದರು.








