ಮಂಗಳೂರು:ಜುಲೈ 28 :ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಅಂತಿಮ ಬಿ.ಎ. ವಿದ್ಯಾರ್ಥಿನಿ ರೆಮೋನಾ ಪಿರೇರಾ ಏಳು ದಿನಗಳ ಕಾಲ ನಿರಂತರ ನೃತ್ಯದೊಂದಿಗೆ 170 ಗಂಟೆ ಸತತ ಭರತನಾಟ್ಯ ಪ್ರದರ್ಶನ ನೀಡಿ ವಿಶ್ವದಾಖಲೆ ಬರೆದಿದ್ದಾರೆ.
ಜು. 21ರಂದು ಬೆಳಗ್ಗೆ 10.30ರಿಂದ ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೆರಾ ಹಾಲ್‌ನಲ್ಲಿ ಭರತನಾಟ್ಯ ಪ್ರದರ್ಶನ ಆರಂಭಿಸಿದ್ದ ರೆಮೋನಾ ಅವರು ಜು.28ರವರೆಗೆ ನಿರಂತರವಾಗಿ ನಾಟ್ಯ ಪ್ರದರ್ಶನ ನೀಡಿದ್ದಾರೆ. ಭರತನಾಟ್ಯದ ವಿವಿಧ ಪ್ರಕಾರಗಳಾದ ಅಲೆರಿಪ್ಪು, ಜತಿಸ್ವರಂ, ಶಬ್ದಂ, ವರ್ಣಂ, ಪದಂ, ತಿಲ್ಲಾನಗಳ ಜತೆಗೆ ಸೆಮಿಕ್ಲಾಸಿಕ್, ದೇವರ ನಾಮಗಳಿಗೆ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. 61 ಪದ್ಯವನ್ನು 3 ಗಂಟೆಗಳಿಗೊಂದರಂತೆ ಜೋಡಿಸಲಾಗುತಿತ್ತು.

ರೆಮೋನಾ ಪಿರೇರಾ ರಾತ್ರಿ-ಹಗಲೆನ್ನದೆ ದಿನವಿಡೀ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಅವರು ಪ್ರತೀ ಮೂರು ಗಂಟೆಗೊಮ್ಮೆ 15 ನಿಮಿಷಗಳ ಕಾಲ ವಿರಾಮ ತೆಗೆದುಕೊಳ್ಳುತ್ತಿದ್ದರು. ಈ ಅವಧಿಯಲ್ಲಿ ಬಾಳೆಹಣ್ಣು, ಮೊಸರು, ಎಳನೀರು, ಅತೀ ಹೆಚ್ಚಾಗಿ ಬೇಯಿಸಿದ ಬೆಳ್ತಿಗೆ ಅನ್ನವನ್ನು ಸೇವಿಸುತ್ತಿದ್ದರು. ಇನ್ನು ಇದಕ್ಕೆಂದು ಆಹಾರ ಕ್ರಮವನ್ನು ಹಲವು ತಿಂಗಳುಗಳಿಂದ ಅಭ್ಯಸಿಸುತ್ತಿದ್ದರು.
ರೆಮೋನಾ ಪಿರೇರಾ ಅವರು ಮೂರು ವರ್ಷದ ಬಾಲಕಿಯಾಗಿದ್ದಾಗಲೇ ಭರತ ನಾಟ್ಯ ಕಲಿಕೆ ಆರಂಭಿಸಿದ್ದರು. ಕಳೆದ 13 ವರ್ಷಗಳಿಂದ ಯೆಯ್ನಾಡಿ ಸೌರಭ ಕಲಾಪರಿಷತ್ತಿನ ಡಾ| ಶ್ರೀವಿದ್ಯಾ ಅವರಲ್ಲಿ ಭರತನಾಟ್ಯ ಕಲಿಯುತ್ತಿದ್ದಾರೆ. 2019ರಲ್ಲಿ ರೆಮೋನಾ ಪಿರೇರಾ ಅವರು ರಂಗಪ್ರವೇಶ ಮಾಡಿದ್ದಾರೆ. ವಿದ್ಯೆಯ ಜೊತೆ ಭರತನಾಟ್ಯಕ್ಕೂ ಸಮಾನ ಪ್ರಾಶಸ್ತ್ಯ ನೀಡುತ್ತಿದ್ದ ಅವರು, ಯಕ್ಷಗಾನ, ಪಾಶ್ಚಾತ್ಯ, ಸಮಕಾಲೀನ ನೃತ್ಯಗಳು, ಸಾಹಸ ನೃತ್ಯವನ್ನು ಸಹ ಮಾಡುತ್ತಾರೆ. ಸಾವಿರಕ್ಕೂ ಅಧಿಕ ವೇದಿಕೆಗಳಲ್ಲಿ ರೆಮೋನಾ ಪಿರೇರಾ ಅವರು ನಾಟ್ಯ ಪ್ರದರ್ಶನ ನೀಡಿದ್ದಾರೆ. ಸದ್ಯ ಅವರು ಭರತನಾಟ್ಯದಲ್ಲಿ ವಿದ್ವತ್ ತಯಾರಿಯಲ್ಲಿದ್ದಾರೆ. .








