ಗೋಕರ್ಣ: ಜುಲೈ 12: ರಷ್ಯಾ ಮೂಲದ ಮಹಿಳೆಯೋರ್ವಳು ತನ್ನ ಇಬ್ಬರು ಚಿಕ್ಕ ಮಕ್ಕಳೊಂದಿಗೆ ತಾಲೂಕಿನ ಗೋಕರ್ಣದ ರಾಮತೀರ್ಥದ ಅರಣ್ಯ ಪ್ರದೇಶದ ಗುಹೆಯೊಂದರಲ್ಲಿ ವಾಸವಿದ್ದಿದ್ದು ಮಾಹಿತಿ ತಿಳಿದ ಗೋಕರ್ಣ ಪೊಲೀಸರು ರಕ್ಷಿಸಿ ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರಿಸಿದ್ದಾರೆ.
ಗೋಕರ್ಣದ ದಟ್ಟಾರಣ್ಯದಲ್ಲಿನ ಗುಹೆಯಲ್ಲಿ ಏಕಾಂತವಾಗಿ ವಾಸವಿದ್ದ ಮೋಹಿ (40), ಅವರ ಪುಟ್ಟ ಮಕ್ಕಳಾದ ಪ್ರೆಯಾ (06) ಹಾಗೂ ಅಮಾ (4) ರಕ್ಷಣೆಗೊಳಗಾದ ರಷ್ಯಾ ಮೂಲದ ಪ್ರಜೆಗಳು.
ರಷ್ಯಾದಿಂದ ಬಿಸಿನೆಸ್ ವೀಸಾದಡಿ ಗೋವಾಕ್ಕೆ ಬಂದಿದ್ದ ಈ ಮಹಿಳೆ ಗೋವಾ ಮೂಲಕ ಗೋಕರ್ಣಕ್ಕೆ ಬಂದು ಇಲ್ಲಿನ ದಟ್ಟ ಅರಣ್ಯವಾದ ರಾಮತೀರ್ಥ ಬಳಿಯ ಗುಹೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಿದ್ದಳು. ಅಲ್ಲಿಯೇ ಪೂಜಾ ಹಾಗೂ ಧ್ಯಾನ ಮಾಡುತ್ತಾ ದಿನ ಕಳೆಯುತಿದ್ದಳು. ಸಿಪಿಐ ಶ್ರೀಧರ್ ನೇತ್ರತ್ವದ ತಂಡ ಈ ಭಾಗದಲ್ಲಿ ಗುಡ್ಡ ಕುಸಿತವಾದ್ದರಿಂದ ಗಸ್ತು ತಿರುಗುವಾಗ ಗುಹೆಯಲ್ಲಿ ಯಾರೋ ವಾಸವಾಗಿರುವುದನ್ನು ಪತ್ತೆ ಮಾಡಿ ವಿದೇಶಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.ಬಳಿಕ ಆಕೆಯ ಇಚ್ಚೆಯಂತೆ ಬಂಕಿಕೊಡ್ಲದ ಎಜಿಓ ಶಂಕರ ಪ್ರಸಾದ ಫೌಂಡೇಶನ್ ಗೆ ಸಂಬಂಧಿಸಿದ ಯೋಗ ರತ್ನ ಸರಸ್ವತಿ ಮಹಿಳಾ ಸ್ವಾಮೀಜಿ ಅವರ ಆಶ್ರಮಕ್ಕೆ ಕರೆತಂದಿದ್ದಾರೆ.
ಈ ವೇಳೆ ಈಕೆಯನ್ನು ಆಪ್ತ ಸಮಾಲೋಚನೆ ಓಳಪಡಿಸಿದಾಗ ಹಿಂದೂ ಧರ್ಮದ ಆಧ್ಯಾತ್ಮದ ಕಡೆ ಹೆಚ್ಚು ಆಸಕ್ತಿ ಇರುವುದರಿಂದ ಪ್ರಕೃತಿಯಲ್ಲಿ ಇರಬೇಕು ಎಂದು ತನ್ನ ಮಕ್ಕಳೊಂದಿಗೆ ಏಕಾಂಗಿಯಾಗಿ ಗುಹೆ ಸೇರಿದ್ದಳು ಎಂಬುದು ತಿಳಿದು ಬಂದಿದೆ. ಹೀಗಾಗಿ ಗುಡ್ಡ ಕುಸಿತವಾಗಿರುವ ರಾಮತೀರ್ಥ ಗುಡ್ಡದ ಗುಹೆಯಲ್ಲಿ ತಮ್ಮ ಪುಟ್ಟ ಮಕ್ಕಳೊಂದಿಗೆ ಕತ್ತಲಲ್ಲೇ ಬದುಕು ಕಳೆಯುತಿದ್ದಳು ಎನ್ನಲಾಗಿದೆ.ಎಸ್.ಪಿ ಎಂ ನಾರಾಯಣ್ ಸಲಹೆಯಂತೆ ಆಕೆ ಹಾಗೂ ಆಕೆಯ ಮಕ್ಕಳನ್ನು ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ರಕ್ಷಣೆಯಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದ್ದು, ರಷ್ಯಾ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಬಳಿಕ ಆಕೆಯ ದೇಶಕ್ಕೆ ಪುನಃ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ ಎಂದು ಎಸ್.ಪಿ ಎಂ ನಾರಾಯಣ ಮಾಹಿತಿ ನೀಡಿದ್ದಾರೆ.