ಉಡುಪಿ, ಜೂನ್.22: ಜಿಲ್ಲೆಯ ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗರಜಿಡ್ಡ ಬಳಿ ನದಿ ಕೊರೆತ ಪ್ರದೇಶಕ್ಕೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಭಾಗದಲ್ಲಿ ನದಿ ಕೊರೆತ ತೀವ್ರಗೊಂಡ ಪರಿಣಾಮ ಹಲವಾರು ತೆಂಗಿನ ಮರಗಳು ಕೊಚ್ಚಿ ಹೋಗಿದ್ದು, ಕಾಂಕ್ರೀಟ್ ಸಂಪರ್ಕ ರಸ್ತೆ ಕಡಿದು ಹೋಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತಕ್ಷಣ ತುರ್ತು ಕಾಮಗಾರಿ ನಡೆಸುವಂತೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಶಾಸಕರು ಸ್ಥಳದಲ್ಲಿಯೇ ಸೂಚನೆ ನೀಡಿದರು.
ನಾಗರಜಿಡ್ಡ ಭಾಗದ ನದಿ ಕೊರೆತ ಸಮಸ್ಯೆ ಇರುವ ಸ್ಥಳಗಳಲ್ಲಿ ಶಾಶ್ವತ ತಡೆಗೋಡೆ ಕಾಮಗಾರಿ ಈಗಾಗಲೇ ಮಂಜೂರಾಗಿದ್ದು ಶೀಘ್ರ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಉಪ್ಪೂರು ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಸತೀಶ್ ಪೂಜಾರಿ, ಸದಸ್ಯರಾದ ಅವಿನಾಶ್ ಶೆಟ್ಟಿ, ಮಹೇಶ್ ಕೋಟ್ಯಾನ್, ರಾಜೇಶ್ ರಾವ್, ನೇತ್ರಾವತಿ, ಪ್ರಶಾಂತ್ ಮಾಯಾಡಿ, ಗ್ರಾಮ ಲೆಕ್ಕಾಧಿಕಾರಿ ಪ್ರಮೋದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಪಮ, ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುನೀಲ್, ಸಹಾಯಕ ಅಭಿಯಂತರ ಪ್ರೀತಮ್ ಮೊದಲಾದವರು ಉಪಸ್ಥಿತರಿದ್ದರು.